ಯಶವಂತ ಚಿತ್ತಾಲ - ಕನ್ನಡದ ಖ್ಯಾತ ಕತೆಗಾರ ಮತ್ತು ಕಾದಂಬರಿಕಾರ. ಅರವತ್ತಾರು ಕಥೆಗಳನ್ನು ಬರೆದಿರುವ ಚಿತ್ತಾಲರರು, ಉತ್ತರ ಕನ್ನಡದ ಚಿಕ್ಕ ಗ್ರಾಮ ಹನೇಹಳ್ಳಿಯ ಕಡೆಯವರು. ಪಾಲಿಮರ್ ಟೆಕ್ನೊಲಜಿ ಓದಿ ಮುಂಬಯಿ ಹೋಗಿ ಅಲ್ಲೇ ನೆಲೆಸಿದರು. == ಜೀವನ == ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ 'ಹನೇಹಳ್ಳಿ'ಯಲ್ಲಿ ಜನನ. ಈ ಪುಟ್ಟ ಹಳ್ಳಿ ಚಿತ್ತಾಲರ ಅಂತರಂಗದ ಒಂದು ಅವಿಭಾಜ್ಯ ಅಂಗವಾಗಿ ಇದೆ. ಅದು ಅವರ ಜೀವನ ಮೌಲ್ಯಗಳನ್ನು ಸಾಣೆಹಿಡಿಯುತ್ತಾ ಹೋಗುತ್ತದೆ. ಚಿತ್ತಾಲರ ತಂದೆ ವಿಠೋಬ. ತಾಯಿ, ರುಕ್ಮಿಣಿ, ದಂಪತಿಗಳ ೭ ಮಕ್ಕಳಲ್ಲಿ ಐದನೆಯವರು ಯಶವಂತರು. ಮನೆ ಭಾಷೆ ಕೊಂಕಣೀ-ಮರಾಠಿ. ಪ್ರಾರಂಭಿಕ ಶಿಕ್ಷಣ, ಹನೇಹಳ್ಳಿ, ಕುಮಟ, ಧಾರವಾಡ, ಮುಂಬಯಿ ಮುಂತಾದ ಕಡೆಗಳಲ್ಲಿ. ಉಚ್ಚ ಶಿಕ್ಷಣ ಅಮೆರಿಕದ ನ್ಯೂಜರ್ಸಿಯಲ್ಲಿ ಪಡೆದಿದ್ದರು. ಕವಿ ಗಂಗಾಧರ ಚಿತ್ತಾಲರು ಇವರ ಅಣ್ಣ. ಶಾಂತಿನಾಥ ದೇಸಾಯಿಯವರು ಮತ್ತು ಗೌರೀಶ ಕಾಯ್ಕಿಣಿಯವರು ಚಿತ್ತಾಲರ ಮೇಲೆ ದಟ್ಟವಾದ ಪ್ರಭಾವ ಬೀರಿದ್ದರು. ಚಿತ್ರಕಲೆಯನ್ನು ಕಲಿಯುವ ಗೀಳು, ಬಾಲ್ಯದಲ್ಲೇ ಅಂತರಾಳದಲ್ಲಿ ಹುದುಗಿತ್ತು. == ಆಸಕ್ತಿಗಳು == ಅವರು ಮುಂಬಯಿಗೆ ಬಂದು, "ಕಲಾನಿಕೇತನ" ಎಂಬ ಶಾಲೆಗೆ ಸಂಜೆ-ತರಗತಿಗೆ ಸೇರಿದರು. ಎಮ್. ಎನ್. ರಾಯ್ ಅವರ ವಿಚಾರಧಾರೆಗಳಿಗೆ ಸ್ಪಂದಿಸಿ, ರ‍್ಯಾಡಿಕಲ್ ಡೆಮೊಕ್ರಾಟಿಕ್ ಪಕ್ಷದ ಸದಸ್ಯರಾದರು. ನವಮಾನವತಾವಾದಿ ಮಾರ್ಕ್ಸ್, ಎರಿಕ್ ಪ್ರಾಂ, ಎಡಿಂಗ್ ಟನ್, ಹಕ್ಸ್ಲಿ, ಫ್ರಾಯ್ಡ್, ಎಡ್ಲರ್, ಮುಂತಾದ ಹಲವು ಧೀಮಂತರ ವಿಚಾರಧಾರೆಗಳಿಗೆ ತಮ್ಮ ಮನಸ್ಸನ್ನು ತೆರೆದಿಟ್ಟರು. ಪ್ಲಾಸ್ಟಿಕ್-ತಂತ್ರಜ್ಞಾನದಲ್ಲಿ, ಶಿಕ್ಷಣ- ಪ್ರಶಿಕ್ಷಣಗಳನ್ನು ಪಡೆದು, "ಬೇಕ್ಲೈಟ್ ಹೈಲಂ" ಎಂಬ ಸಂಸ್ಥೆಯಲ್ಲಿ ನೌಕರಿಗೆ ಸೇರಿಕೊಂಡರು. ೩೦ ವರ್ಷಕ್ಕೂ ಮೀರಿ ಸಲ್ಲಿಸಿದ ಸೇವೆಯಿಂದ, ಆಧುನಿಕ ಜಗತ್ತಿನ ಸ್ವರೂಪವನ್ನೆ ನಿಯಂತ್ರಿಸುವ, ಬಂಡವಾಳಶಾಹೀ, ಕೈಗಾರಿಕಾ ಜಗತ್ತಿನ ನಿಕಟ-ಪರಿಚಯವನ್ನು ಮಾಡಿಕೊಂಡರು. ಉದ್ಯೋಗದ ಪರಿಸರದಲ್ಲೂ, ವೈಯಕ್ತಿಕ ಜೀವನದಲ್ಲೂ, ಆದ ದುರಂತಗಳೂ, ಬಿಕ್ಕಟ್ಟುಗಳೂ, ಅವರ ಬರವಣಿಗೆಯ ಗ್ರಾಸಗಳಾದವು. ಅವೆಲ್ಲವನ್ನೂ ಮೆಟ್ಟಿ, ತಮ್ಮ ಜೀವನಶ್ರದ್ಧೆಯ ಸೋಪಾನದ ಮೇಲೆ ನಿಂತು, ಆತ್ಮವಿಶ್ವಾಸದಿಂದ ಮುನ್ನುಗ್ಗಿದರು. ತಮ್ಮ ಸೃಜನಶೀಲ ವ್ಯಕ್ತಿತ್ವದಿಂದ, ತಮ್ಮ ಕಥೆ-ಕಾದಂಬರಿಗಳಲ್ಲಿ ಅದರ ವಿಶಿಷ್ಟರೂಪಗಳ ಅನನ್ಯ ಬರವಣಿಗೆಯನ್ನು ನೀಡಿದ್ದಾರೆ. == ಸಾಹಿತ್ಯ ಕೃಷಿ == 'ಬೊಮ್ಮಿಯ ಹುಲ್ಲು ಹೊರೆ' ೧೯೪೯ರಲ್ಲಿ ಬರೆದ ಅವರ ಮೊತ್ತ ಮೊದಲ ಕಥೆ. ೧೯೫೭ರಲ್ಲಿ ಮೈತಳೆದ, "ಸಂದರ್ಶನ" ಕಥಾಸಂಕಲನದಿಂದ ಹಿಡಿದು, ೧೯೯೦ರಲ್ಲಿ ಹೊರಬಂದ "ಪುರುಷೋತ್ತಮ"ದವರೆಗೆ, ಚಿತ್ತಾಲರು ಬರೆದ, ವಿವಿಧ ಕೃತಿಗಳನ್ನು ಪರಿಶೀಲಿಸಿದರೆ, ಆ ಬರವಣಿಗೆಯ ಹಿಂದಿರುವ ತುಡಿತಗಳನ್ನು ನಾವು ಗುರುತಿಸಬಹುದು. ಅವರ ಜನ್ಮಭೂಮಿ, 'ಹನೇಹಳ್ಳಿ,' ಅವರ ಹಲವಾರು ಬರಹಗಳ ಕೇಂದ್ರಬಿಂದು. ಬಾಲ್ಯದ ಭೂತಕಾಲವನ್ನು, ವರ್ತಮಾನದ ಸಂಕೀರ್ಣ ಬದುಕಿನೊಂದಿಗೆ ಹೋಲಿಸಿ, ಅದನ್ನು ಇಡೀ ಮನುಕುಲದಲ್ಲಿ ಸಂಭವಿಸಿರುವ ಅಸ್ತಿತ್ವದ ಬಿಕ್ಕಟ್ಟಿಗೆ ಪ್ರತಿಮೆಯಾಗಿ, ಪರಿವರ್ತಿಸುತ್ತಾರೆ ; ಅವರ ಪ್ರಶಸ್ತಿ ವಿಜೇತ ಕಾದಂಬರಿ, "ಪುರುಷೋತ್ತಮ" ದಲ್ಲಿ, ನಾಯಕನ ಸಿದ್ಧಿಯ ಚರಮ-ಕ್ಷಣಗಳೆಂದರೆ, ಅವನ ಹನೇಹಳ್ಳಿಗೆ ಮತ್ತೆ ಜೀವತುಂಬಿ-ತುಳುಕಾಡುವುದೇ ಆಗಿದೆ. ಅವರು ಏಕೆ ಬರೆಯುತ್ತಾರೆ ಎನ್ನುವ ಬಗ್ಗೆ ಕೊಟ್ಟಿರುವ ನಿರೂಪಣೆ ಅನನ್ಯವಾಗಿದೆ. " ಒಟ್ಟಿನಲ್ಲಿ ನಾನು ಬರೆಯುತ್ತಿದ್ದದ್ದು, ನಾನು ನಾನೇ ಆಗಲು. ನಾನು ನಾನಾಗಿಯೇ ಉಳಿದು, ಉಳಿದವರಿಂದ ಬರೆಯಲು ಪ್ರೀತಿಸುವುದನ್ನು ಕಲಿಯಲು, ಪ್ರೀತಿಸುವುದರ ಮೂಲಕ, ಜೀವಂತ ಸಂಬಂಧಗಳನ್ನು ಹುಟ್ಟಿಸಲು. ಉಳಿದವರನ್ನು ತಿದ್ದುವುದಕ್ಕಲ್ಲ- ಆ ಯೋಗ್ಯತೆಯಾಗಲೀ ಅಧಿಕಾರವಾಗಲೀ ನನಗಿಲ್ಲ." == ಕೃತಿಗಳು == === ಕಥಾಸಂಕಲನಗಳು === ಸಂದರ್ಶನ (೧೯೫೬) ಆಬೋಲಿನ (೧೯೬೦) ಆಟ (೧೯೬೯) ಬೇನ್ಯಾ (೧೯೮೩) ಆಯ್ದ ಕತೆಗಳು (೧೯೭೬) ಕಥೆಯಾದಳು ಹುಡುಗಿ (೧೯೮೦) ಚಿತ್ತಾಲರ ಕತೆಗಳು (೧೯೮೩) ಕುಮಟೆಗೆ ಬಂದಾ ಕಿಂದರಿಜೋಗಿ (೧೯೯೭) ಓಡಿ ಹೇೂದಾ ಮುಟ್ಟಿ ಬಂದಾ (೨೦೦೧) ಸಿದ್ಧಾರ್ಥ (೧೯೮೮) ಐವತ್ತೊಂದು ಕತೆಗಳು (೨೦೦೦) ಪುಟ್ಟನ ಹೆಜ್ಜೆ ಕಾಣೋದಿಲ್ಲಾ (೨೦೦೬) ಕೇೂಳಿ ಕೂಗುವ ಮುನ್ನ (೨೦೧೨) ಸಮಗ್ರ ಕತೆಗಳು ( ಸಂಪುಟ ೧ ಮತ್ತು ೨ ) (೨೦೦೯) === ಕಾದಂಬರಿಗಳು === ಮೂರು ದಾರಿಗಳು (೧೯೬೪) ಶಿಕಾರಿ (೧೯೭೯) ಛೇದ (೧೯೮೫) ಪುರುಷೋತ್ತಮ (೧೯೯೦) ಕೇಂದ್ರ ವೃತ್ತಾಂತ (೧೯೯೭) ದಿಗಂಬರ (೨೦೨೨) === ಕವನ ಸಂಕಲನ === ದಣಪೆಯಾಚೆಯ ಓಣಿ === ಪ್ರಬಂಧ ಸಂಗ್ರಹಗಳು === ಸಾಹಿತ್ಯ, ಸೃಜನಶೀಲತೆ ಮತ್ತು ನಾನು (೧೯೮೧) ಸಾಹಿತ್ಯದ ಸಪ್ತಧಾತುಗಳು (೨೦೦೧) ಅಂತಃಕರಣ (೨೦೦೮) == ಪ್ರಶಸ್ತಿಗಳು == 'ಕಥೆಯಾದಳು ಹುಡುಗಿ' ಎಂಬ ಕೃತಿಗೆ ೧೯೮೩ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು 'ಮಹಾರಾಷ್ಟ್ರ ಗೌರವ ಪುರಸ್ಕಾರ' ದೊರಕಿದೆ. 'ಶಿಕಾರಿ' ಕಾದಂಬರಿಗೆ ೧೯೭೯ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿಶೇಷ ಪ್ರಶಸ್ತಿ ಮತ್ತು 'ವರ್ಧಮಾನ ಪ್ರಶಸ್ತಿ' ದೊರೆತಿದೆ. 'ಪುರುಷೋತ್ತಮ' ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಮತ್ತು ಭಾರತೀಯ ಭಾಷಾ ಸಂಸ್ಥಾನದ ಪ್ರಶಸ್ತಿ. ೨೦೦೨ನೇ ಸಾಲಿನ 'ನಿರಂಜನ ಪ್ರಶಸ್ತಿ' ಪಂಪ ಪ್ರಶಸ್ತಿ ಮಾಸ್ತಿ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಶಿವರಾಮ ಕಾರಂತ ಪ್ರಶಸ್ತಿ ಶ್ರೀ ಗುರುನಾರಾಯಣ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿ == ನಿಧನ == ಶ್ರೀ ಯಶವಂತ ಚಿತ್ತಾಲರು ೨೦೧೪ ರ ಮಾರ್ಚ್ ೨೨, ಶನಿವಾರ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರ ಅಂತ್ಯ ಸಂಸ್ಕಾರವು ೨೩, ಭಾನುವಾರದಂದು, ಮುಂಬೈನ ಶಿವಾಜಿ ಪಾರ್ಕ್ ನ, ವಿದ್ಯುತ್ ಚಿತಾಗಾರದಲ್ಲಿ ಅವರ ಹಿರಿಯ ಮಗ 'ರವೀಂದ್ರ'ನಿಂದ ನೆರೆವೇರಿಸಲ್ಪಟ್ಟಿತು. == ಉಲ್ಲೇಖಗಳು ==